ಚಾಟೆಲ್‍ಪೆರ್ರಾನಿಯನ್
-	ಯೂರೋಪಿನ ಹಳೆಯ ಶಿಲಾಯುಗದ ಅಂತ್ಯಕಾಲಕ್ಕೆ ಸೇರಿದ ಕಲ್ಲಿನಾಯುಧಗಳ ಒಂದು ಸಂಸ್ಕøತಿ. ಇದು ಮಧ್ಯಫ್ರಾನ್ಸಿನ ಅಲಿಯರ್ ಜಿಲ್ಲೆಯಲ್ಲಿರುವ ಚಾಟೆಲ್‍ಪೆರ್ರಾನ್ ಎಂಬಲ್ಲಿ ಮೊತ್ತ ಮೊದಲಿಗೆ ಕಂಡುಬಂದುದರಿಂದ ಈ ಸಂಸ್ಕøತಿಯನ್ನು ಈ ಹೆಸರಿನಿಂದ ಕರೆಯಲಾಗಿದೆ. ಫ್ರಾನ್ಸಿನ ನೈಋತ್ಯ ಭಾಗದಲ್ಲಿ ಈ ಸಂಸ್ಕøತಿ ಹೆಚ್ಚು ಬಳಕೆಯಲ್ಲಿತ್ತು. ಈ ಸಂಸ್ಕøತಿಯ ಮುಖ್ಯ ಆಯುಧವೆಂದರೆ, ಕಲ್ಲು ಚಕ್ಕೆಯಿಂದ ಅದರ ಒಂದು ಅಂಚನ್ನು ಚೂಪಾಗಿಯೂ, ಮತ್ತೊಂದು ಅಂಚನ್ನು ಮೊಂಡಾಗಿಯೂ ಇರುವಂತೆ ಮಾಡಿದ ಚಾಕು. ಇದಲ್ಲದೆ ಕೊರೆಯುವ ಉಳಿ, ಹೆರೆಯುವ ಆಯುಧಗಳು ಮತ್ತು ಮೊನೆಗಳು ಉಪಯೋಗದಲ್ಲಿರುತ್ತಿದ್ದುವು. ಆಧುನಿಕ ಮಾನವ (ಹೊಮೋಸೇಪಿಯನ್) ರೂಢಿಗೆ ತಂದ ಶಿಲಾಯುಗ ಸಂಸ್ಕøತಿಗಳಲ್ಲಿ ಇದೇ ಮೊದಲನೆಯದು. ಮೂಳೆ, ದಂತ ಮತ್ತು ಕೊಂಬಿನಿಂದ ತಯಾರಿಸಿದ ಆಯುಧಗಳ ಉಪಯೋಗವೂ ಪೂರ್ವಶಿಲಾಯುಗಕಾಲದ ಕಲೆಯ ಸೃಷ್ಟಿಯೂ ಯೂರೋಪಿನ ಹಲವು ಭಾಗಗಳಲ್ಲಿ ಈ ಸಂಸ್ಕøತಿಯೊಂದಿಗೆ ಪ್ರಾರಂಭವಾದುವು. ಬಲವಾದ ಮತ್ತು ಚೂಪಾದ ಮೊನೆಯುಳ್ಳ ಬ್ಯೂರಿನ್ ಎಂಬ ಕೆತ್ತುವ ಆಯುಧ ಬಳಕೆಗೆ ಬಂದುದೇ ಇದಕ್ಕೆ ಮುಖ್ಯ ಕಾರಣ. ಬದಲಾಗುತ್ತಿದ್ದ ವಾಯುಗುಣದಿಂದ ಅಸ್ತಿತ್ವಕ್ಕೆ ಬಂದ ಚಾಟಲ್‍ಪೆರ್ರಾನಿಯನ್ ಸಂಸ್ಕøತಿಯ ಕಾಲದಿಂದ ಮಾನವನ ದೈನಂದಿನ ಜೀವನ ವಿಧಾನದಲ್ಲಿ ಸುಧಾರಣೆಯುಂಟಾಯಿತು. ರೇಡಿಯೋಕಾರ್ಬನ್ ವಿಧಾನದ ಮೂಲಕ ಗ್ರೋಟ್ ಡ್ಯು ರೆವೆಯಲ್ಲಿ ಈ ಸಂಸ್ಕøತಿಯ ಕಾಲಗಳು ಕ್ರಿ.ಪೂ. 31,690+250 ಮತ್ತು 31,550+400. ಇದು ಕ್ರಿ.ಪೂ. 35,000-34,00 ದಷ್ಟು ಹಿಂದೆಯೇ ಆರಂಭವಾಗಿದ್ದಿರಲೂಬಹುದು.								(ಬಿ.ಕೆ.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ